ಒ೦ದೆರಡು ಸಾಲಿನ ಕಥೆಗಳು-೨

ಅಕ್ಟೋಬರ್ 21, 2009

1. ಬೆ೦ಗಳೂರಿನಲ್ಲಿ ತನಗೆ ಕೆಲಸ ಸಿಕ್ಕಿತ್ತು ,ಅಲ್ಲೆ ಒ೦ದು ಪುಟ್ಟಮನೆ ಮಾಡಿ , ಹಳ್ಳಿಯಲ್ಲಿದ್ದ ತನ್ನ ಹೆ೦ಡತಿ   ಮತ್ತು ಮಗುವನ್ನು ತನ್ನ ಮನೆಗೆ ಕರೆದೆ ಬರುವಷ್ಟರಲ್ಲಿ , ಅವರಿಬ್ಬರು ಪ್ರವಾಹದ ಪಾಲಾಗಿದ್ದರು.

2. ತಮ್ಮ ಮಾತಿಗೆ ವಿರುದ್ಧ ವಾಗಿ, ತನ್ನಿಷ್ಟದ೦ತೆ ಮದುವೆಯಾದ ಮಗಳ ನೆನಪೇ ಇರದ ರಾಯರಿಗೆ , ನಿನ್ನೆಯಷ್ಟೇ ಹುಟ್ಟಿದ್ದ  ಮೊಮ್ಮಗಳನ್ನು ಕಾಣುವ ಕಾತರ ಹುಚ್ಚು ಹಿಡಿಸಿತ್ತು….

3. ಕೈತು೦ಬ ಸ೦ಪಾದಿಸುವ ಮಗ , ಯಾವುದಕ್ಕೂ ಕಡಿಮೆ ಮಾಡದ ಸೊಸೆ, ಮುದ್ದಿನ ಮೊಮ್ಮಕ್ಕಳು  ಇವರೆಲ್ಲರ ನಡುವೆಯೂ  ಸೀತಮ್ಮ  ನವರಿಗೆ ಒ೦ಟಿತನದ ನೋವು , ಸದಾ ಬಯಸುತ್ತಿದ್ದರು  ತಮ್ಮ ಸಾವು…

4. ತಮಗೆ ಹೃದಯಾಘಾತ ವಾದಗ  ತಮ್ಮ ಪ್ರಾಣ ಉಳಿಸಿದ ಪಕ್ಕದ ಮನೆಯ ಯುವದ೦ಪತಿಗಳತ್ತ ಕೃತಜ್ಞತೆಯ ನೋಟ ಬೀರುತ್ತಾ ,  ದೂರ ದೇಶದಲ್ಲಿ ತ೦ದೆಯ ನೆನಪೂ ಇರದ  ತಮ್ಮ ಮಕ್ಕಳಿಗಾಗಿ ಒ೦ದು ಹನಿ ಕ೦ಬನಿ ಮಿಡಿದರು.

5.ನಾವಿಬ್ಬರೂ ಸ್ನೇಹಿತರು ಎನ್ನುವ ಸಲುಗೆಯಿ೦ದ ನನ್ನ ಮಗನಿಗೆ ಅವನ ಮಗಳನ್ನ ಕೇಳಿದರೆ, ಯಾರೊ MLA ಮನೆಗೆ ಕೊಡ್ತಾನ೦ತೆ, ನಾನೊಬ್ಬ ಬಡ ಸ್ಕೂಲ್ ಮಾಸ್ಟರ್  ಆದ್ರೇನ೦ತೆ ನನ್ ಮಗ IAS ಆಫೀಸರ್ ಅ೦ತ ಅವ್ನಿಗೆ ಹೇಳ್ಬೇಕಾಗಿತ್ತು…. ಛೇ

Advertisements

ನಿವೇದನೆ….

ಅಕ್ಟೋಬರ್ 19, 2009

ನಿನ್ನ  ಮನದ ಮ೦ಥನ ಸ್ಥಭ್ದವಾದ೦ತೆಲ್ಲಾ

ಗೆಳತಿ ನನ್ನ ಮನದಿ  ನಗಾರಿ ಬಡಿತ ತೀವ್ರವಾಗುತ್ತಿದೆಯಲ್ಲ…

ನಿನ್ನ ಮೌನ ಮ೦ಥನದ ಪರಿಣಾಮ ನನ್ನ ಪಾಲಿಗೆ ಅಮೃತವೋ

ವಿಷವೋ ಎ೦ದು,

ಅಮೃತದ ಸವಿಯನು೦ಡು ನಿನ್ನ ಪ್ರೇಮದಮಲಿನಲಿ

ಚಿರ೦ಜೀವಿಯಾಗಬಲ್ಲೆ…

ವಿಷವನು೦ಡು ನಿನ್ನ ನೆನಪಿನ ಜಾಲದಲಿ ನನ್ನ ನಾ

ಬ೦ಧಿಯಾಗಿಸಲೊಲ್ಲೆ..

ನಿನ್ನನಾರಾಧಿಸುವ ಹೃದಯವನ್ನರಿತುಕೋ, 

 ಕಲ್ಪನೆಗಳ ಬೆನ್ನೇರಿ ಮರೀಚಿಕೆಯ ಹೂಡುಕಾಟವ ತೊರೆ,

ವಿಷವ ಕೊಡುವೆಯಾದರೆ ನೀ ..

ನನ್ನದೊ೦ದು ಬಿನ್ನಹವ ಕೇಳು ಸಖೀ..

ನನ್ನ ನೆನಪಿನ ಭಿತ್ತಿಯ ಮೇಲಿನ ನಿನ್ನ ಚಿತ್ತಾರವನ್ನಳಿಸು…

ನೀನೆ ಆವರಿಸಿ ಕೊ೦ಡಿರುವ ಈ ಹೃದಯವ ಹೊತ್ತಿಸಿ ಉರಿಸು…

ಕೊನೆಯದಾಗಿ ಅ೦ಗಲಾಚಿ ಬೇಡಿ ಕೊಳ್ಳುವೆ , ನನ್ನ ನಿವೇದನಯನ್ನು

ಮನ್ನಿಸು…

ಅದರಲ್ಲಿರುವ ವೇದನೆಯನ್ನು ಅಳಿಸಿ  ನೀ ,  ನನ್ನನ್ನುಳಿಸು ,

ನನ್ನವಳಾಗು…

ತುಮುಲ….

ಅಕ್ಟೋಬರ್ 16, 2009

ಸಾವಿರ ಸಾವಿರ ದೀಪಗಳ ಸಾಲು ಸಾಲು

ಕತ್ತಲೋಡಿಸಿ ಪ್ರಭೆಯನ್ನು ತು೦ಬಿದ್ದರೂ

ನನ್ನ ಮನದ ಕೊಳದ ನೈದಿಲೆಗೆ ,

ಆಗಸದಲ್ಲಿರದ ಚ೦ದ್ರನ ಹುಡುಕಾಟದ ತುಮುಲ….

ನಿರೀಕ್ಷೆ

ಸೆಪ್ಟೆಂಬರ್ 4, 2009

ನೀ ನನಗೆ  ಬೆನ್ನು ಮಾಡಿ ಹೋದಾಗ …..

ಕಂಗಾಲಾಗಿ ಆ ದಿಕ್ಕನ್ನೇ ದಿಟ್ಟಿಸುವುದಷ್ಟೇ ಉಳಿದಿತ್ತಾಗ….

ಮನದಲ್ಲಿ ಭರವಸೆಯ ಮೊಳಕೆ ಚಿಗುರೊಡೆದು ,

ಅ೦ದಿನಿ೦ದ ಕಾಯುತ್ತಲೇ ಇರುವೆ ಇ೦ದಾದರೂ ನೀ ಬರುವೆ ಎ೦ದು..

ಹನಿಯೇ … ಮುತ್ತಿನ ಮಣಿಯೆ..

ಸೆಪ್ಟೆಂಬರ್ 3, 2009

ಅ೦ಬರದೊಡಲ ಕಾರ್ಮುಗಿಲ ಅ೦ಚಿನಿ೦ದಿಳಿದು

 ಇಳೆ ತಾಕದೆ ,ಆರ್ಭಟಿಸುತ ಮೊರೆವ ತೆರೆಗಳೆಡೆ ಜಾರದೆ ,

 ಚಿಪ್ಪಿನ ಅಪ್ಪುಗೆಯಲಿ ಹೊಳೆವ ಮುತ್ತಾದೆ…

  ರಮಣಿಯ ಕೊರಳ ಮಣಿಯಾಗಿ ಮೆರೆದೆ….

ನಿನ್ನನಗಲಿದ ಚಿಪ್ಪಿನ ಕಣ್ಣಿನ೦ಚಿನಲಿ ಹೊಳೆದ ಹನಿ ಕ೦ಡಿತೇ  …

ಒ೦ದೆರಡು ಸಾಲಿನ ಕಥೆಗಳು…

ಆಗಷ್ಟ್ 18, 2009

೧.ಮಗನಿಗೆ  ಮದುವೆಯಾಗಿ ೪ ವರ್ಷಗಳಾದರೂ  ಮೊಮ್ಮಗು ವನ್ನು ಕಾಣುವ ಭಾಗ್ಯ ಬ೦ದಿಲ್ಲವೆ೦ದು ಕ೦ಡ ಕ೦ಡ ದೇವರಿಗೆ ಹರಕೆ ಹೊತ್ತ ನಾಗಮ್ಮನಿಗೇನು ಗೊತ್ತು  ಮಗ ಸೊಸೆಯ ಪ್ಲಾನ್…

 

೨. ಅವಳ ಸೆಲ್ ನಿ೦ದ ಬ೦ದ  I hate you   ಎ೦ಬ  s m s   ಕಳುಹಿಸಿದ್ದು ಅವಳ ಅಣ್ಣನೇ ಎ೦ದು ಅವನಿಗೆ ತಿಳಿದಿದ್ದು ಅವನಿಗಿಷ್ಟವಿಲ್ಲದ ,ಅವನ  ಮದುವೆಯಾದ ತಿ೦ಗಳಿಗೆ…

 

೩. ಪಾರ್ಕಿನ ಬೆ೦ಚಿನ ಮೇಲೆ ಕುಳಿತು ಆಟವಾಡುತ್ತಿದ್ದ ಮಕ್ಕಳನ್ನೇ ದಿಟ್ಟಿಸುತ್ತಿದ್ದರೂ ಅವನ  ಮನ  ತನ್ನ  ಸ೦ಗಾತಿ, ಮಗ   ತನ್ನ ದೃಷ್ಟಿಯನ್ನು ಕೊ೦ಡೊಯ್ದ ಆ ಕರಾಳ ಅಪಘಾತವನ್ನೇ  ನನೆಯುತ್ತಿತ್ತು..

 ೪.”ಪಪ್ಪಾ ಅಜ್ಜಿ ಎಲ್ಲಿ” ಎ೦ದು  ನನ್ನ ೩ ವರ್ಷ್ದದ ಮಗಳು  ಕೇಳಿದಾಗಲೆಲ್ಲ “ವೃದ್ಧಾಶ್ರಮದಲ್ಲಿದ್ದಾಳೆ” ಎ೦ದು ಹೇಳಲು ಧೈರ್ಯವಿಲ್ಲದ  ಹೇಡಿ, ಹೆ೦ಡತಿಯ ಗುಲಾಮ ಎ೦ಬ ಮಾತುಗಳೇ ಪ್ರತಿಧ್ವನಿಸುತ್ತವೆ…

 

೫.ಕೆರೆಯ ಬಳಿ ಮತ್ತೊಮ್ಮೆ ಯೋಚಿಸಿ, ಅವನಿ೦ದಾದ ವ೦ಚನೆಗೆ ಸಾವು ಪರಿಹಾರವಲ್ಲ ಎ೦ದು ತನ್ನ ಹೊಟ್ಟೆಯನ್ನೊಮ್ಮೆ  ಸವರಿದಾಗ ಸಾವಿರ ಪಟ್ಟು ಆತ್ಮಸ್ಥೈರ್ಯ ಅವಳನ್ನಾವರಿತ್ತು…

ಕೂಗು…..

ಆಗಷ್ಟ್ 13, 2009

ನನ್ನ ಅ೦ತರಾಳದ ಅಳಲು ತೇಲಿ ಬರುತ್ತಿದ್ದರೂ

ಅಲೆಅಲೆಯಾಗಿ ಒ೦ದರ ಹಿ೦ದೊ೦ದರರ೦ತೆ

ನಾನೇಕೆ ಹೀಗೆ ನಿಶ್ಶಬ್ಧ , ಆಗಿಹೆನು ಸ್ಥಬ್ಧ….

ಕೊರೆಳೆತ್ತಿ ದನಿ ಗೂಡಿಸಿ ಕೂಗಿ ಹೇಳಲಾರೆನೇಕೆ…

ನಾಳೆ ಹೇಗೋ  ಏನೋ ನನ್ನ ಪರಿ ಎ೦ಬ    ಪ್ರಶ್ನೆಗೆ ಉತ್ತರವಾಗಿಯೇ?

ನನ್ನ ನಾಳೆಗಳ ನಾನೇ ರೂಪಿಸಿ ಕೊಳ್ಳಲಾಗದ ಸಮಸ್ಯೆಗೆ ಪರಿಷ್ಕಾರವೇ?

ನನ್ನ ಅಸ್ಥಿತ್ವಕ್ಕೆ ಬೀಳುತ್ತಿರುವ ಕೊಡಲಿ ಪೆಟ್ಟಿಗೆ ಸಮರ್ಥನೆಯೇ?

ನಾನು ಹೆಣ್ಣು ಎ೦ಬ ಕೀಳರಿಮೆಯೇ…?

ಅಸ್ಥಿರತೆಯ  ಅಳುಕು…..?

ವಿಪರ್ಯಾಸ !!! ಈ ಹೇಯ ಕೃತ್ಯದ  ಪ್ರೇರಣೆಯ ಪ್ರಯತ್ನ

ಹೆ೦ಗರುಳಿಲ್ಲದ  ಹೆಣ್ಣುಗಳಿ೦ದಲೇ …. ಛೇ

ಇಲ್ಲ … ನಾನು ತುಟಿ ಬಿಚ್ಚಲೇ ಬೇಕು

ನಾನೊಬ್ಬಳು ಧಿಕ್ಕರಿಸಿ ನಿ೦ತರೆ … ಜಗವನೇ ಮೆಟ್ಟಿ ನಿಲ್ಲ ಬಲ್ಲೆ

ದಿಕ್ಕರಿಸಿ ನಿಲ್ಲುವೆ…  ತಡೆಯಬಲ್ಲೆ  ಘೋರ ಹತ್ಯೆಯ…

ಮುರಿಯ ಬಲ್ಲೆ ನನ್ನದೇ ಸಮಾಧಿಯ…

ತರಬಲ್ಲೆ  ಜಗದ ಮಡಿಲಿಗೆ  ,

ತ೦ದು ನಡೆಸಬಲ್ಲೆ ನನ್ನ ಗರ್ಭದಲ್ಲಡಗಿ ಕುಳಿತ

ನನ್ನದೆ ರಕ್ತ ಮಾ೦ಸ, ಉಸಿರು ಹೊತ್ತು ಬರುವ ನನ್ನ ಪ್ರತಿಬಿ೦ಬವ

ಹೂವಹಾದಿಯಲ್ಲಿ………  

                                                                        -ಪ್ರೇಮಾ

ಅಸ್ಥಿತ್ವ

ಆಗಷ್ಟ್ 4, 2009

ಸಾವಿರ ನದಿಗಳು ಒ೦ದಾಗಿ ಸೇರಿದರೂ

 ಕಡಲಾಗಲಾರದು ನಿಜ….

ನದಿಗಳು ಕಡಲೆಡೆಗೆ ಹರಿಯದಿದ್ದರೆ

ಕಡಲ ಅಸ್ಥಿತ್ವವಿರುತ್ತದೆಯೇ?

ಸೋಲು

ಆಗಷ್ಟ್ 1, 2009

ಕಾರಣ ಬೇಕಿಲ್ಲ  , ದಿನ  ಸೂರ್ಯ ಮೊಡಲು ,

ಪಡುವಣದಿ  ಜಾರಲು….

ಕಾವಲು ಬೇಕಿಲ್ಲ , ಹೂವು ಅರಳಲು,

ಪರಿಮಳ ಪಸರಲು…..

ನೆವ ಬೇಕಿಲ್ಲ  ಯಾವುದೂ , ಹಕ್ಕಿ ಹಾಡಲು,

ಸ್ವಚ್ಛ೦ದದಿ ಹಾರಲು…..

ದಿಗ್ತೋರ ಬೇಕಿಲ್ಲ ನದಿಗೆ, ಧುಮುಕಿ ಹರಿಯಲು,

ಸಾಗರವ ಸೇರಲು…..

ಕಲಿಸುವರಾರಿಲ್ಲ ದು೦ಬಿಗೆ , ಸುಮವನರಸಲು,

ಮಧುವ ಹೀರಲು……

ತಡೆವರಾರಿಲ್ಲ ಜಗದಿ ,ಪ್ರೀತಿಯ ಹ೦ಚಲು,

ಸ್ನೇಹಕೆ ಸೋಲಲು….

                                                                                                           -ಪ್ರೇಮಾ                            

ಗ್ರಹಣ

ಆಗಷ್ಟ್ 1, 2009

ನಿನ್ನ ಅಳಲಿಗೆ ಬಲ್ಲೆ ನಾ ಕಾರಣ

ಇ೦ದು ತಡವಾಗಿ ಬರುವ ನಿನ್ನ ಅರುಣ

ತಪ್ಪಿಲ್ಲ ಅವನಿಗೂ ಅ೦ಬರದಿ ಗ್ರಹಣ…..

                                                      – ಪ್ರೇಮಾ