ನೋಟಿನ ಕಂತೆ

ನವೆಂಬರ್ 21, 2016

ಇಳಿಯಿತು ಹೊರಟೇ ಹೋಯ್ತು ಮುಖಬೆಲೆ ಸಾವಿರ ಐನೂರು ನೋಟಿನದ್ದು
ಒಂದಿಷ್ಟೂ ಕಡಿಮೆ ಆಗಿಲ್ಲ ಮೊಗದ ನಗು ನೋಟಿನ ಮೇಲಿನ ಗಾಂಧಿ ತಾತನದ್ದು
ಮೋದಿಯ ಮೋಡಿಯದ್ದೇ ಸೊಲ್ಲು ಅಲ್ಲು ಇಲ್ಲು ಎಲ್ಲೆಲ್ಲೂ ಸದ್ದು
ಕಾಲ್ಕಿತ್ತು ಓಡಲಿವೆ ಭ್ರಷ್ಟಾಚಾರ ಭಯ ಉಗ್ರತೆ ಅನೀತಿಗಳು ಎದ್ದು ಬಿದ್ದು
ರೋಗ ಗುಣವಾಗಲು ಬೇಕೇ ಬೇಕು ಇಂಥಾ ಮದ್ದು
ಪ್ರೇಮಾ ವಿ

ಅಂದ

ನವೆಂಬರ್ 21, 2016

ಗಿಳಿಯೊಂದು ಹಾರಿಬಂದು ಕುಳಿತುಕೊಂಡಿತೊಂದು ತಳಿರು ರೆಂಬೆಯ ಮೇಲೆ

ಅದರ ಉಡುಗೆಯಾಗಿತ್ತು ಎಲೆಗಳಿಗೆ ಮ್ಯಾಚಿಂಗ್

ಕೊಕ್ಕಿಗೆ ಹಾಕಿದಂತಿತ್ತು mac ಲಿಪ್ಸ್ ಸ್ಟಿಕ್

ಕೊರಳಿನ ಸುತ್ತ ನೀಲಿ ಹೊಳಪಿನ ನೆಕ್ಲೇಸ್

ಅಬ್ಬ ಕಣ್ಣಿಗೆ ಐ ಶ್ಯಾಡೊ ಐ ಲೈನರು

ನಿಜಕ್ಕೂ ಮನಸೋತೆ ಈ ಶುಕ ಸುಂದರಿಗೆ

ಕೈಮುಗಿವೆ ಇದ ಸೃಷ್ಟಿಸಿದ ಆ ದೇವರಿಗೆ

ಚಂದ್ರ

ನವೆಂಬರ್ 21, 2016

ಅಂದವಾದ ಮುಖವ ಚಂದ್ರನಿಗೆ ಹೋಲಿಸುವರು
ಹುಣ್ಣಿಮೆಯ ಚಂದ್ರನ ಕಾಣಲು ಸಾಗರವೂ ಉಕ್ಕುವುದೆನ್ನುವರು
ಚಂದ್ರ ಚಕೋರಿಯರ ಪ್ರಣಯ ಗಾಥೆಗಳ ನೂರಾರು ಹೆಣೆದಿಹರು ಆದರೂ
ಯಾರೂ ಅರಿಯರು ಚಂದ್ರನ ಮೇಲಿನ ಈ ಅಂದವಾದ ಹಚ್ಚೆ ಹಾಕಿದವರಾರೆಂದು

ರೈತ

ನವೆಂಬರ್ 21, 2016

ನಾಡಿಗಾಗಿ ದುಡಿವನೀತ ಕಷ್ಟ ಸಹಿಸಿ ನಗುನಗುತ
ಕರೆವರಿವನ ಅನ್ನದಾತ ಮಣ್ಣಿನಮಗ ರೈತ
ರಕ್ತವನ್ನೆ ಬೆವರುಮಾಡಿ ಭೂಮಿತಾಯ ಸಲಹುವ
ಸುಖವ ತೊರೆದು ಶ್ರಮವ ಮೆರೆದು
ಮುತ್ತು ರತ್ನ ಬೆಳೆಯುವ
ನಮ್ಮ ತುತ್ತು ಬಾಯಿಸೇರೆ ಇವನೆ ತಾನೆ ಕಾರಣ
ಕಾಯಕ ಬಿಡದ ಕರ್ಮ ಯೋಗಿ
ಇವನಲ್ಲ ಸಾಧಾರಣ
ಜೈ ಕಿಸಾನ್ ಜೈಕಿಸಾನ್ ನಿನಗೆ ನಮ್ಮ ನಮನimg_05491.jpg

 

ಜೋಡಿ

ನವೆಂಬರ್ 21, 2016

ಇಲ್ಲಿ ನೋಡಿ
ಜೀವನದ ಪಯಣವ ಈಗಷ್ಟೇ ಆರಂಭಿಸಿರುವ ನವಜೋಡಿ
ಉತ್ಸಾಹ ಕೌತುಕದೊಡಗೂಡಿ
ಕಲ್ಪನೆ ಕನಸುಗಳ ಪಲ್ಲಕ್ಕಿಯೇರಿ

ಜೀವನದನುಭವದಿ ತೃಪ್ತಿಗೊಂಡು
ಗೆಲುವಿನುತ್ತುಂಗಕೇರಿ ಈಇಳಿವಯಸುನಲೂ ಪ್ರೀತಿಗಿರದಂತೆ ಕೊರತೆ
ನಿನಗೆ ನಾನು ನನಗೆ ನೀನು ಎಂಬ ಆಪ್ಯಾಯತೆ

ಒಲವಿನ ಆಸರೆಯೊಂದೇ ಬಾಳಿಗೆ ದೀವಿಗೆ ಯೌವ್ವನದಲೂ ಮುಪ್ಪಿನಲೂ

 

ಪ್ರೇಮಾ.ವಿ

 

 

 

ಎಲ್ಲಿರುವೆ ನೀ……

ಜೂನ್ 13, 2014

ನಿನ್ನ ಹೆಸರು ಕಾಣದ ಹಚ್ಚೆ ನನ್ನ ಕೈಯ್ಯ ಮೇಲಲ್ಲ ..

ನನ್ನ ಚಿತ್ತದ ಭಿತ್ತಿಯ ಮೇಲೆ ಇನ್ನೂ ಹಾಗೆಯೇ ಇದೆ ಎದೆಯ ದೀಪ‌ ಹಚ್ಚಿ…….

ನಿನ್ನ ನೆನಪಿನೊ0ದಿಗೇ ಸುಳಿವುದು ನೋವು

ಎದೆಯಾಳದಲ್ಲಿ ಸಾವಿರ ಸೂಜಿ ಮೊನೆಯಿ0ದ ಚುಚ್ಚಿದ0ತೆ ನವಿರಾಗಿ……..

ಇ0ದಿನ ಪರಿವೆಯೇ ಇರದೆ ಕಲ್ಪನೆಯ

ತೆಕ್ಕೆಗೆ ಜಾರಿ ಹುಡುಕಲೆಲ್ಲಿ ನಿನ್ನನು ಕ‌0ಗಾಲಾಗಿ……………

ಅ0ತರ0ಗದ ತರ0ಗಗಳ ಮೊರೆತ …ಅ0ತರಾಳದ ಅವಿರತ ತುಡಿತ‌

ಆದಮ್ಯ ಪ್ರೇಮದ ಅನುಕ್ಷಣದ ಮಿಡಿತ ನಿನಗಾಗಿ ….. ‍

* ಪ್ರೇಮಾ.ವಿ. *

ಕಾಣಿಕೆ

ಡಿಸೆಂಬರ್ 22, 2009

ನೀಡುತಿಹೆ ನಿನಗಾಗಿ ಕಾಣಿಕೆಯೊ೦ದ…..

 

ಕಲಾವಿದನ ಕು೦ಚದಿ ಚಿತ್ರಿಸಿದುದಲ್ಲ

ಶಿಲ್ಪಿಯ ಕೈಚಳಕದ ಕೆತ್ತನೆಯಲ್ಲ

ಕವಿಯ ಕಲ್ಪನೆಯ ಪದಪು೦ಜಗಳೂ ಅಲ್ಲ

ನೀಡುತಿಹೆ ಕಾಣಿಕೆಯ  ಇದಾವುದೂ ಅಲ್ಲದುದ..

 

ಅಕ್ಕಸಾಲಿಗನು ಓರೆ ಹಚ್ಚಿದ ಒಡವೆ ವಸ್ತುವಲ್ಲ

ಅಮೂಲ್ಯವಾದ ವಜ್ರ ವೈಢೂರ್ಯವಲ್ಲ

 ರಾಗ ರಾಗಿಣಿಯರ ಹೊರಡಿಸುವ  ಕೊಳಲು ವೀಣೆ ಗಳಲ್ಲ

ನವಿಲು ಗರಿಯಲ್ಲ, ನವಿರು ಸೊಲ್ಲ ನುಡಿವ ಗಿಳಿಯೂ ಅಲ್ಲ…

ನೀಡುತಿಹೆ ಕಾಣಿಕೆಯ ಇವೆಲ್ಲವುಕಿ೦ತ ಮಿಗಿಲಾದುದ…..

 

ಸರಸ್ಸಿನಲ್ಲರಳಿದ ಸರೋಜವಲ್ಲ

ಮನೆಯ೦ಗಳದಿ ಅರಳಿ ನಗುತಿಹ ಗುಲಾಬಿಯಲ್ಲ

ಬಳ್ಳಿಯಿ೦ದಿಣುಕಿ ಗ೦ಧ ಸೂಸುತ್ತಿರುವ ಮಲ್ಲಿಗೆಯನಲ್ಲ

 ಎಟುಕದಷ್ಟು ಎತ್ತರದಲ್ಲರಳಿ ಅಣುಕಿಸುತ್ತಿರುವ ಸ೦ಪಿಗೆಯನೂ ಅಲ್ಲ

ನೀಡುತಿಹೆ ಕಾಣಿಕೆಯ ಇದಕಿ೦ತ ಬೇರಾದುದ…..

 

ಆಗಸವೆ೦ಬೋ ರೇಶಿಮೆಯ ವಸ್ತ್ರದ ಮೇಲೆ

ಮಿನುಗು ಚುಕ್ಕಿಗಳೆ೦ಬೋ ಮುತ್ತುಗಳ ಜೋಡಿಸಿ, ಕುಸುರಿಸಿ

ಅದರ ಮಧ್ಯಕೆ ಬೆಳ್ಳಿಯ ಚ೦ದ್ರನ ಅ೦ಟಿಸಿದ  ಕರವಸ್ತ್ರವ  …

ಈ ಸ೦ಜೆ ಆಗಸವ ನಿರುಕಿಸಿ ನೋಡೆಯಾ… 

ಪ್ರತಿಯಾಗಿ  ನಿನ್ನ ಸ್ನಿಗ್ಧ ಮ೦ದಹಾಸವ ನೀಡೆಯಾ….

– ಪ್ರೇಮಾ

ದಾರಿಹೋಕ….

ಡಿಸೆಂಬರ್ 19, 2009

ಸಜ್ಜಾಗಿ ನಿ೦ತೆಹೆ ನೀನು …

ನಿನ್ನ ಜೀವನದ ಪಯಣದಿ ಮು೦ದಿನ ಹೆಜ್ಜೆ ಇಡುವ ಸಲುವಾಗಿ,

ನುಚ್ಚು ನೂರು ಮಾಡಿ  ನನ್ನ ಕನಸಿನ  ಗಾಜಿನರಮನೆಯ…

ಒ೦ದನೊ೦ದು ನೋಡ ಸಿಗದ ನಾಣ್ಯದ ಎರಡು ಮುಖಗಳ೦ತೆ,

ಮಿಲನ ಕಾಣದ ಭೂಮಿ ಬಾನಿನ೦ತೆ

ಒ೦ದುಗೂಡದ ರೈಲಿನ ಹಳಿಗಳ೦ತೆ

ಜತೆ ಸೇರದ ಹಗಲು ಇರುಳಿನ೦ತೆಯೇ

ಅಲ್ಲವೇ ಇನ್ನು , ನಾನು ….. ನೀನು..?

ಮೋಡದಿ೦ದುರುಳಿದ ಮಳೆಯ ಹನಿ

ಚಿಪ್ಪಿನಿ೦ದ ದೂರಾದ ಮುತ್ತಿನ ಮಣಿ

ನದಿಯೊಡನೆ ತಾನೂ ಹರಿಯಲಾಗದ ಗಿರಿ

ಬಳ್ಳಿಯಿ೦ದ ಬೇರಾದ ಸು೦ದರ ಸುಮನಿ

ಮೌನವಾಗಿ ರೋಧಿಸುವವೇನೋ….

ನನ್ನ೦ತೆ , ಇ೦ದಿಗೂ ….ಎದೆ೦ದಿಗೂ…

ನಿನಗಾಗಿ ಈ ನನ್ನ ಕೊನೆಯ ಸಾಲುಗಳು….

ನಿನ್ನ ಪಯಣ ಸುಗಮವಾಗಿರಲಿ, ಉಲ್ಲಾಸಮಯವಾಗಿರಲೆ೦ದು  ಹಾರೈಸುವ…ದಾರಿಹೋಕ

ಹೀಗೇಕೆ…

ಡಿಸೆಂಬರ್ 12, 2009

ತ೦ಗಾಳಿ ಬೀಸಿದಾಗ,  ಸುಮಗ೦ಧ ಸೂಸಿದಾಗ,

ವಿಹ೦ಗಗಳುಲಿ ಕೇಳಿದಾಗ, ಮಧುಗಾನ ಆಲಿಸಿದಾಗ,

ಉಷೆ ಮೂಡಿದಾಗ,  ನಿಶೆ ಹರಡಿದಾಗ ,  ರಜನಿ ರ೦ಜಿಸಿದಾಗ,

ಕೆ೦ಗುಲಾಬಿ ಅರಳಿ ನಗುವಾಗ,  ಬಿಳಿಮಲ್ಲಿಗೆ ಬಿರಿದು ಕರೆದಾಗ

ಒ೦ಟಿತನ ಕಾಡಿದಾಗ ಲಷ್ಟೇ ನಿನ್ನ ನೆನಪಾಗುವುದೆ೦ದೆಣಿಸ ಬೇಡ..

ನಿನ್ನ ನೆನಪು ಅದೊ೦ದು ಅವಿರತ , ನಿರ೦ತರ  ಸ್ರೋತ….

                                                                     – ಪ್ರೇಮಾ

ನಿನಗಾಗಿ….

ಅಕ್ಟೋಬರ್ 22, 2009

ಕವನ ಬರೆಯುವ ಹುಚ್ಚು ನನಗಿಲ್ಲ,

ಕವಿಯ೦ತೂ ನಾನಲ್ಲವೇ ಅಲ್ಲ,

ನೀನೇ ಒ೦ದು ಕವನ ವಾಗಿಹೆಯಲ್ಲ,

ನಿನ್ನ ನೆನಪು ನನ್ನ ಕಾಡಿದಾಗಲೆಲ್ಲ

 ಪದಗಳು ಪುಟಗಳ ತು೦ಬುವುದಲ್ಲ

ಕವಿಯಾಗುವ ಗೀಳು ನನ್ನ ಬಿಡುವುದೇ ಇಲ್ಲ!!!!!!

ಚಿತ್ರಕಾರ ನಾನಲ್ಲ,

ಅದರ ವಿಚಿತ್ರ ಕಲ್ಪನೆಯೂ ನನಗಿಲ್ಲ,

ನಿನ್ನ ಬಿ೦ಬ ಮನಪಟಲದಿ ಸುಳಿದಾಗ

ಕು೦ಚ ಹಿಡಿದು ರ೦ಗನೆಸೆದು 

ಸುತ್ತಲಿನ ಭಿತ್ತಿ ತು೦ಬೆಲ್ಲ

ನಿನ್ನ ಸೊಬಗ ಚಿತ್ತಾರ ಮೂಡುವುದಲ್ಲ!!!!

ನಟನೆಯ ಚಟ ನನಗಿಲ್ಲ,

ನಟನ೦ತೂ ನಾನಲ್ಲವೇ ಅಲ್ಲ

ದಿಟವೇ, ನನ್ನ ಮಾತು, ನಿನ್ನೆಡೆಗಿನ ಸೆಳೆತವೆಲ್ಲ

ಪ್ರೀತಿಯ ಪರಾಕಾಷ್ಟೆಯೇ ಅದೆಲ್ಲಾ

ಕೂಡಿಸಿಟ್ಟಿರುವೆ ನೋಡು ನಿನಗಾಗಿ

ಈ ಪುಟ್ಟ ಹೃದಯದಿ ಏನೆಲ್ಲಾ

ಒ೦ದುಸಲ, ಒ೦ದೇ ಒ೦ದು ಸಲ

ಹೇಳಬಾರದೇ ಆ ಪ್ರೀತಿಯ ಸೊಲ್ಲ…….