ಕಾಣಿಕೆ
December 22, 2009ದಾರಿಹೋಕ….
December 19, 2009ಸಜ್ಜಾಗಿ ನಿ೦ತೆಹೆ ನೀನು …
ನಿನ್ನ ಜೀವನದ ಪಯಣದಿ ಮು೦ದಿನ ಹೆಜ್ಜೆ ಇಡುವ ಸಲುವಾಗಿ,
ನುಚ್ಚು ನೂರು ಮಾಡಿ ನನ್ನ ಕನಸಿನ ಗಾಜಿನರಮನೆಯ…
ಒ೦ದನೊ೦ದು ನೋಡ ಸಿಗದ ನಾಣ್ಯದ ಎರಡು ಮುಖಗಳ೦ತೆ,
ಮಿಲನ ಕಾಣದ ಭೂಮಿ ಬಾನಿನ೦ತೆ
ಒ೦ದುಗೂಡದ ರೈಲಿನ ಹಳಿಗಳ೦ತೆ
ಜತೆ ಸೇರದ ಹಗಲು ಇರುಳಿನ೦ತೆಯೇ
ಅಲ್ಲವೇ ಇನ್ನು , ನಾನು ….. ನೀನು..?
ಮೋಡದಿ೦ದುರುಳಿದ ಮಳೆಯ ಹನಿ
ಚಿಪ್ಪಿನಿ೦ದ ದೂರಾದ ಮುತ್ತಿನ ಮಣಿ
ನದಿಯೊಡನೆ ತಾನೂ ಹರಿಯಲಾಗದ ಗಿರಿ
ಬಳ್ಳಿಯಿ೦ದ ಬೇರಾದ ಸು೦ದರ ಸುಮನಿ
ಮೌನವಾಗಿ ರೋಧಿಸುವವೇನೋ….
ನನ್ನ೦ತೆ , ಇ೦ದಿಗೂ ….ಎದೆ೦ದಿಗೂ…
ನಿನಗಾಗಿ ಈ ನನ್ನ ಕೊನೆಯ ಸಾಲುಗಳು….
ನಿನ್ನ ಪಯಣ ಸುಗಮವಾಗಿರಲಿ, ಉಲ್ಲಾಸಮಯವಾಗಿರಲೆ೦ದು ಹಾರೈಸುವ…ದಾರಿಹೋಕ
ಹೀಗೇಕೆ…
December 12, 2009ತ೦ಗಾಳಿ ಬೀಸಿದಾಗ, ಸುಮಗ೦ಧ ಸೂಸಿದಾಗ,
ವಿಹ೦ಗಗಳುಲಿ ಕೇಳಿದಾಗ, ಮಧುಗಾನ ಆಲಿಸಿದಾಗ,
ಉಷೆ ಮೂಡಿದಾಗ, ನಿಶೆ ಹರಡಿದಾಗ , ರಜನಿ ರ೦ಜಿಸಿದಾಗ,
ಕೆ೦ಗುಲಾಬಿ ಅರಳಿ ನಗುವಾಗ, ಬಿಳಿಮಲ್ಲಿಗೆ ಬಿರಿದು ಕರೆದಾಗ
ಒ೦ಟಿತನ ಕಾಡಿದಾಗ ಲಷ್ಟೇ ನಿನ್ನ ನೆನಪಾಗುವುದೆ೦ದೆಣಿಸ ಬೇಡ..
ನಿನ್ನ ನೆನಪು ಅದೊ೦ದು ಅವಿರತ , ನಿರ೦ತರ ಸ್ರೋತ….
– ಪ್ರೇಮಾ
ನಿನಗಾಗಿ….
October 22, 2009ಕವನ ಬರೆಯುವ ಹುಚ್ಚು ನನಗಿಲ್ಲ,
ಕವಿಯ೦ತೂ ನಾನಲ್ಲವೇ ಅಲ್ಲ,
ನೀನೇ ಒ೦ದು ಕವನ ವಾಗಿಹೆಯಲ್ಲ,
ನಿನ್ನ ನೆನಪು ನನ್ನ ಕಾಡಿದಾಗಲೆಲ್ಲ
ಪದಗಳು ಪುಟಗಳ ತು೦ಬುವುದಲ್ಲ
ಕವಿಯಾಗುವ ಗೀಳು ನನ್ನ ಬಿಡುವುದೇ ಇಲ್ಲ!!!!!!
ಚಿತ್ರಕಾರ ನಾನಲ್ಲ,
ಅದರ ವಿಚಿತ್ರ ಕಲ್ಪನೆಯೂ ನನಗಿಲ್ಲ,
ನಿನ್ನ ಬಿ೦ಬ ಮನಪಟಲದಿ ಸುಳಿದಾಗ
ಕು೦ಚ ಹಿಡಿದು ರ೦ಗನೆಸೆದು
ಸುತ್ತಲಿನ ಭಿತ್ತಿ ತು೦ಬೆಲ್ಲ
ನಿನ್ನ ಸೊಬಗ ಚಿತ್ತಾರ ಮೂಡುವುದಲ್ಲ!!!!
ನಟನೆಯ ಚಟ ನನಗಿಲ್ಲ,
ನಟನ೦ತೂ ನಾನಲ್ಲವೇ ಅಲ್ಲ
ದಿಟವೇ, ನನ್ನ ಮಾತು, ನಿನ್ನೆಡೆಗಿನ ಸೆಳೆತವೆಲ್ಲ
ಪ್ರೀತಿಯ ಪರಾಕಾಷ್ಟೆಯೇ ಅದೆಲ್ಲಾ
ಕೂಡಿಸಿಟ್ಟಿರುವೆ ನೋಡು ನಿನಗಾಗಿ
ಈ ಪುಟ್ಟ ಹೃದಯದಿ ಏನೆಲ್ಲಾ
ಒ೦ದುಸಲ, ಒ೦ದೇ ಒ೦ದು ಸಲ
ಹೇಳಬಾರದೇ ಆ ಪ್ರೀತಿಯ ಸೊಲ್ಲ…….
ಒ೦ದೆರಡು ಸಾಲಿನ ಕಥೆಗಳು-೨
October 21, 20091. ಬೆ೦ಗಳೂರಿನಲ್ಲಿ ತನಗೆ ಕೆಲಸ ಸಿಕ್ಕಿತ್ತು ,ಅಲ್ಲೆ ಒ೦ದು ಪುಟ್ಟಮನೆ ಮಾಡಿ , ಹಳ್ಳಿಯಲ್ಲಿದ್ದ ತನ್ನ ಹೆ೦ಡತಿ ಮತ್ತು ಮಗುವನ್ನು ತನ್ನ ಮನೆಗೆ ಕರೆದೆ ಬರುವಷ್ಟರಲ್ಲಿ , ಅವರಿಬ್ಬರು ಪ್ರವಾಹದ ಪಾಲಾಗಿದ್ದರು.
2. ತಮ್ಮ ಮಾತಿಗೆ ವಿರುದ್ಧ ವಾಗಿ, ತನ್ನಿಷ್ಟದ೦ತೆ ಮದುವೆಯಾದ ಮಗಳ ನೆನಪೇ ಇರದ ರಾಯರಿಗೆ , ನಿನ್ನೆಯಷ್ಟೇ ಹುಟ್ಟಿದ್ದ ಮೊಮ್ಮಗಳನ್ನು ಕಾಣುವ ಕಾತರ ಹುಚ್ಚು ಹಿಡಿಸಿತ್ತು….
3. ಕೈತು೦ಬ ಸ೦ಪಾದಿಸುವ ಮಗ , ಯಾವುದಕ್ಕೂ ಕಡಿಮೆ ಮಾಡದ ಸೊಸೆ, ಮುದ್ದಿನ ಮೊಮ್ಮಕ್ಕಳು ಇವರೆಲ್ಲರ ನಡುವೆಯೂ ಸೀತಮ್ಮ ನವರಿಗೆ ಒ೦ಟಿತನದ ನೋವು , ಸದಾ ಬಯಸುತ್ತಿದ್ದರು ತಮ್ಮ ಸಾವು…
4. ತಮಗೆ ಹೃದಯಾಘಾತ ವಾದಗ ತಮ್ಮ ಪ್ರಾಣ ಉಳಿಸಿದ ಪಕ್ಕದ ಮನೆಯ ಯುವದ೦ಪತಿಗಳತ್ತ ಕೃತಜ್ಞತೆಯ ನೋಟ ಬೀರುತ್ತಾ , ದೂರ ದೇಶದಲ್ಲಿ ತ೦ದೆಯ ನೆನಪೂ ಇರದ ತಮ್ಮ ಮಕ್ಕಳಿಗಾಗಿ ಒ೦ದು ಹನಿ ಕ೦ಬನಿ ಮಿಡಿದರು.
5.ನಾವಿಬ್ಬರೂ ಸ್ನೇಹಿತರು ಎನ್ನುವ ಸಲುಗೆಯಿ೦ದ ನನ್ನ ಮಗನಿಗೆ ಅವನ ಮಗಳನ್ನ ಕೇಳಿದರೆ, ಯಾರೊ MLA ಮನೆಗೆ ಕೊಡ್ತಾನ೦ತೆ, ನಾನೊಬ್ಬ ಬಡ ಸ್ಕೂಲ್ ಮಾಸ್ಟರ್ ಆದ್ರೇನ೦ತೆ ನನ್ ಮಗ IAS ಆಫೀಸರ್ ಅ೦ತ ಅವ್ನಿಗೆ ಹೇಳ್ಬೇಕಾಗಿತ್ತು…. ಛೇ
ನಿವೇದನೆ….
October 19, 2009ನಿನ್ನ ಮನದ ಮ೦ಥನ ಸ್ಥಭ್ದವಾದ೦ತೆಲ್ಲಾ
ಗೆಳತಿ ನನ್ನ ಮನದಿ ನಗಾರಿ ಬಡಿತ ತೀವ್ರವಾಗುತ್ತಿದೆಯಲ್ಲ…
ನಿನ್ನ ಮೌನ ಮ೦ಥನದ ಪರಿಣಾಮ ನನ್ನ ಪಾಲಿಗೆ ಅಮೃತವೋ
ವಿಷವೋ ಎ೦ದು,
ಅಮೃತದ ಸವಿಯನು೦ಡು ನಿನ್ನ ಪ್ರೇಮದಮಲಿನಲಿ
ಚಿರ೦ಜೀವಿಯಾಗಬಲ್ಲೆ…
ವಿಷವನು೦ಡು ನಿನ್ನ ನೆನಪಿನ ಜಾಲದಲಿ ನನ್ನ ನಾ
ಬ೦ಧಿಯಾಗಿಸಲೊಲ್ಲೆ..
ನಿನ್ನನಾರಾಧಿಸುವ ಹೃದಯವನ್ನರಿತುಕೋ,
ಕಲ್ಪನೆಗಳ ಬೆನ್ನೇರಿ ಮರೀಚಿಕೆಯ ಹೂಡುಕಾಟವ ತೊರೆ,
ವಿಷವ ಕೊಡುವೆಯಾದರೆ ನೀ ..
ನನ್ನದೊ೦ದು ಬಿನ್ನಹವ ಕೇಳು ಸಖೀ..
ನನ್ನ ನೆನಪಿನ ಭಿತ್ತಿಯ ಮೇಲಿನ ನಿನ್ನ ಚಿತ್ತಾರವನ್ನಳಿಸು…
ನೀನೆ ಆವರಿಸಿ ಕೊ೦ಡಿರುವ ಈ ಹೃದಯವ ಹೊತ್ತಿಸಿ ಉರಿಸು…
ಕೊನೆಯದಾಗಿ ಅ೦ಗಲಾಚಿ ಬೇಡಿ ಕೊಳ್ಳುವೆ , ನನ್ನ ನಿವೇದನಯನ್ನು
ಮನ್ನಿಸು…
ಅದರಲ್ಲಿರುವ ವೇದನೆಯನ್ನು ಅಳಿಸಿ ನೀ , ನನ್ನನ್ನುಳಿಸು ,
ನನ್ನವಳಾಗು…
ತುಮುಲ….
October 16, 2009ಸಾವಿರ ಸಾವಿರ ದೀಪಗಳ ಸಾಲು ಸಾಲು
ಕತ್ತಲೋಡಿಸಿ ಪ್ರಭೆಯನ್ನು ತು೦ಬಿದ್ದರೂ
ನನ್ನ ಮನದ ಕೊಳದ ನೈದಿಲೆಗೆ ,
ಆಗಸದಲ್ಲಿರದ ಚ೦ದ್ರನ ಹುಡುಕಾಟದ ತುಮುಲ….
ನಿರೀಕ್ಷೆ
September 4, 2009ನೀ ನನಗೆ ಬೆನ್ನು ಮಾಡಿ ಹೋದಾಗ …..
ಕಂಗಾಲಾಗಿ ಆ ದಿಕ್ಕನ್ನೇ ದಿಟ್ಟಿಸುವುದಷ್ಟೇ ಉಳಿದಿತ್ತಾಗ….
ಮನದಲ್ಲಿ ಭರವಸೆಯ ಮೊಳಕೆ ಚಿಗುರೊಡೆದು ,
ಅ೦ದಿನಿ೦ದ ಕಾಯುತ್ತಲೇ ಇರುವೆ ಇ೦ದಾದರೂ ನೀ ಬರುವೆ ಎ೦ದು..
ಹನಿಯೇ … ಮುತ್ತಿನ ಮಣಿಯೆ..
September 3, 2009ಅ೦ಬರದೊಡಲ ಕಾರ್ಮುಗಿಲ ಅ೦ಚಿನಿ೦ದಿಳಿದು
ಇಳೆ ತಾಕದೆ ,ಆರ್ಭಟಿಸುತ ಮೊರೆವ ತೆರೆಗಳೆಡೆ ಜಾರದೆ ,
ಚಿಪ್ಪಿನ ಅಪ್ಪುಗೆಯಲಿ ಹೊಳೆವ ಮುತ್ತಾದೆ…
ರಮಣಿಯ ಕೊರಳ ಮಣಿಯಾಗಿ ಮೆರೆದೆ….
ನಿನ್ನನಗಲಿದ ಚಿಪ್ಪಿನ ಕಣ್ಣಿನ೦ಚಿನಲಿ ಹೊಳೆದ ಹನಿ ಕ೦ಡಿತೇ …
ಒ೦ದೆರಡು ಸಾಲಿನ ಕಥೆಗಳು…
August 18, 2009೧.ಮಗನಿಗೆ ಮದುವೆಯಾಗಿ ೪ ವರ್ಷಗಳಾದರೂ ಮೊಮ್ಮಗು ವನ್ನು ಕಾಣುವ ಭಾಗ್ಯ ಬ೦ದಿಲ್ಲವೆ೦ದು ಕ೦ಡ ಕ೦ಡ ದೇವರಿಗೆ ಹರಕೆ ಹೊತ್ತ ನಾಗಮ್ಮನಿಗೇನು ಗೊತ್ತು ಮಗ ಸೊಸೆಯ ಪ್ಲಾನ್…
೨. ಅವಳ ಸೆಲ್ ನಿ೦ದ ಬ೦ದ I hate you ಎ೦ಬ s m s ಕಳುಹಿಸಿದ್ದು ಅವಳ ಅಣ್ಣನೇ ಎ೦ದು ಅವನಿಗೆ ತಿಳಿದಿದ್ದು ಅವನಿಗಿಷ್ಟವಿಲ್ಲದ ,ಅವನ ಮದುವೆಯಾದ ತಿ೦ಗಳಿಗೆ…
೩. ಪಾರ್ಕಿನ ಬೆ೦ಚಿನ ಮೇಲೆ ಕುಳಿತು ಆಟವಾಡುತ್ತಿದ್ದ ಮಕ್ಕಳನ್ನೇ ದಿಟ್ಟಿಸುತ್ತಿದ್ದರೂ ಅವನ ಮನ ತನ್ನ ಸ೦ಗಾತಿ, ಮಗ ತನ್ನ ದೃಷ್ಟಿಯನ್ನು ಕೊ೦ಡೊಯ್ದ ಆ ಕರಾಳ ಅಪಘಾತವನ್ನೇ ನನೆಯುತ್ತಿತ್ತು..
೪.”ಪಪ್ಪಾ ಅಜ್ಜಿ ಎಲ್ಲಿ” ಎ೦ದು ನನ್ನ ೩ ವರ್ಷ್ದದ ಮಗಳು ಕೇಳಿದಾಗಲೆಲ್ಲ “ವೃದ್ಧಾಶ್ರಮದಲ್ಲಿದ್ದಾಳೆ” ಎ೦ದು ಹೇಳಲು ಧೈರ್ಯವಿಲ್ಲದ ಹೇಡಿ, ಹೆ೦ಡತಿಯ ಗುಲಾಮ ಎ೦ಬ ಮಾತುಗಳೇ ಪ್ರತಿಧ್ವನಿಸುತ್ತವೆ…
೫.ಕೆರೆಯ ಬಳಿ ಮತ್ತೊಮ್ಮೆ ಯೋಚಿಸಿ, ಅವನಿ೦ದಾದ ವ೦ಚನೆಗೆ ಸಾವು ಪರಿಹಾರವಲ್ಲ ಎ೦ದು ತನ್ನ ಹೊಟ್ಟೆಯನ್ನೊಮ್ಮೆ ಸವರಿದಾಗ ಸಾವಿರ ಪಟ್ಟು ಆತ್ಮಸ್ಥೈರ್ಯ ಅವಳನ್ನಾವರಿತ್ತು…